ಕಂಪನಾಂಕಿಗಳೇ, ಇದು ಮಹಿಳಾ-ಮಾಸ! ಇದಾಗಲೇ ತಿಳಿಸಿದ್ದಂತೆ ಈ ಇಡೀ ತಿಂಗಳು ಮಹಿಳೆಯರಿಗೆ ಸಂಬಂಧಿಸಿದಂತೆ ಹಲವು ಕಾರ್ಯಕ್ರಮಗಳಿಗೆ ಕಂಪನಾಂಕ ವೇದಿಕೆಯಾಗುತ್ತಿದೆ. ಈ ನಿಟ್ಟಿನಲ್ಲಿ 'ವಾರದ_ವಿಶೇಷ' ಅಂಕಣದಲ್ಲಿಯೂ ಈ ತಿಂಗಳ ಶನಿವಾರಗಳಂದು ಗಾಯಕಿಯರ ಕಿರು-ಮರು ಪರಿಚಯವನ್ನು ಮಾಡಲಾಗುತ್ತಿದೆ ಸ್ವೀಕರಿಸಿ… 

- ಹಿಂದಿಯ ಜ಼ೀ ಟಿ.ವಿಯ 'ಟಿ.ವಿ.ಎಸ್.ಸರೆಗಮಪ' ಕಾರ್ಯಕ್ರಮದಲ್ಲಿ ಕನ್ನಡತಿ ಪರದೆಯ ಮೇಲೆ ಕಾಣುತ್ತಿದ್ದಂತೆ, ಜೊತೆಗೆ ಉಡುಪ' ಎಂಬ ಹೆಸರು ಕೇಳಿದ ಕೂಡಲೇ ನಾನು ಕರೆ ಮಾಡಿದ್ದು ನಮ್ಮ ಸುಗಮಸಂಗೀತ ಗಾಯಕಿ, ನನ್ನ ಕುಟುಂಬಸ್ನೇಹಿತರೂ ಆದ ಹೆಸರಾಂತ ಶ್ರೀಮತಿ.ಇಂದು ವಿಶ್ವನಾಥ್ ಅವರಿಗೆ. (ಅವರ ಕುರಿತಾದ ಲೇಖನಕ್ಕೆ ಇಲ್ಲಿ ನೋಡಿ - https://www.facebook.com/photo/?fbid=10160627230936092&set=gm.1151552308894883&idorvanity=619414802108639) ಈಕೆ ಅರ್ಚನಾ ಉಡುಪ ಮತ್ತು ಕನ್ನಡದ, ಸುಗಮಸಂಗೀತದ ಮತ್ತೊಬ್ಬ ಹೆಸರಾಂತ ಗಾಯಕ ಶ್ರೀನಿವಾಸ ಉಡುಪ ಅವರ ಸುಪುತ್ರಿ ಎಂದಾಕ್ಷಣ ಮೈಯೆಲ್ಲಾ ಕಿವಿಯಾಗಿದ್ದು ಸತ್ಯ! ಅಂದು ಇಡೀ ದಕ್ಷಿಣಭಾರತದಿಂದ ಹಿಂದಿ ಚಲನಚಿತ್ರ ಗಾಯನ ಸ್ಪರ್ಧೆಯಲ್ಲಿ ವಿಜೇತಳಾದ ಏಕೈಕ ಗಾಯಕಿಯಾಗಿ ಕನ್ನಡತಿ ಅರ್ಚನಾ ಉಡುಪ ಹೊರಹೊಮ್ಮಿದ್ದು ಹೆಮ್ಮೆಯ ಸಂಗತಿ.
ಹೌದು ಕಂಪಿನಾಂಕಿಗಳೆ…
ಕಂಪನಾಂಕಟೆಲಿರೇಡಿಯೋ'ದ #ವಾರದವಿಶೇಷ ಅಂಕಣದಲ್ಲಿಂದು ಶಾಸ್ತ್ರೀಯ ಸಂಗೀತ, ಭಕ್ತಿಗೀತೆ ಮತ್ತು ಚಲನಚಿತ್ರ ಗೀತ ಗಾಯಕಿ #ಅರ್ಚನಾಉಡುಪ ಅವರ ಕಿರು, ಮರು ಪರಿಚಯ ನಿಮಗಾಗಿ.
ಆಕಾಶವಾಣಿಯಲ್ಲಿ ಇವರ ಸಂದರ್ಶನ ನಡೆಸಿದಾಗಿನ ಸಂತೋಷ ಸಮಯವನ್ನಂತೂ ವೈಯಕ್ತಿಕವಾಗಿ ನನಗೆ ಮರೆಯಲು ಸಾಧ್ಯವೇ ಇಲ್ಲ. ಜೊತೆಗೆ ಇವರ ಹಾಡುಗಾರಿಕೆಯ ಕೆಲವು ವೇದಿಕೆ ಕಾರ್ಯಕ್ರಮಗಳಿಗೆ ನಿರೂಪಕಿಯಾಗಿಯೂ ಸದಾ ಹಸನ್ಮುಖಿ ಅರ್ಚನಾ ಅವರ ಒಡನಾಟ ನನಗೆ ಅತ್ಯಂತ ಪ್ರೀತಿಪಾತ್ರವಾದದ್ದು.
ಇವರು ಸಂಗೀತಜ್ಞರು ಮತ್ತು ಸಂಗೀತ ಪ್ರಿಯರ ಕುಟುಂಬದಲ್ಲಿ ಜನಿಸಿದವರು. ಹಾಗಾಗಿಯೇ ತಮ್ಮ 3ನೇ ವಯಸ್ಸಿನಲ್ಲಿಯೇ ಸಂಗೀತ ಕಲಿಯಲು ಆರಂಭಿಸಿದರು. ಮತ್ತು ಕೇವಲ 5 ವರ್ಷದಲ್ಲಿಯೇ ದೆಹಲಿ ಮತ್ತು ಮುಂಬೈ ಕನ್ನಡ ಸಂಘಗಳಲ್ಲಿ ಗಾಯನ ಪ್ರದರ್ಶನವನ್ನು ನೀಡಿದರು.
ಶ್ರೀ.ಬಾಲಕೃಷ್ಣ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ, ಲಘು ಸಂಗೀತವನ್ನು ತಮ್ಮ ತಂದೆ ಸ್ವಯಂ ಸುಗಮಸಂಗೀತಗಾರರಾದ ಶ್ರೀ.ಶ್ರೀನಿವಾಸ ಉಡುಪ ಅವರಲ್ಲಿಯೂ ಆರಂಭಿಸಿದರು.
ತದನಂತರದಲ್ಲಿ ಹಿಂದೂಸ್ತಾನಿ ಶೈಲಿಯ ಹಾಡುಗಾರಿಕೆಗೆ ಮನಸೋತು ಶ್ರೀಮತಿ.ಶಕುಂತಲಾ ನರಸಿಂಹನ್ ಅವರಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಅಭ್ಯಾಸವನ್ನು ಮಾಡಲಾರಂಭಿಸಿದರು.
ಓದಿದ್ದು, ಪತ್ರಿಕೋದ್ಯಮದಲ್ಲಿ ಬಿ.ಎ., ಮತ್ತು ಸಮಾಜಶಾಸ್ತ್ರದಲ್ಲಿ ಎಂ.ಎ. ಆದರೂ ಒಲವು ಮಾತ್ರ ಸಂಗೀತದೆಡೆಗೆ.
ನೀನು ಮಾಮರವಾದೆ
ಬರುತಿಹನು ನೋಡೆ ಮತ್ತು ಓ ನನ್ನ ಅಪರಂಜಿ (ಎಂ.ಡಿ.ಪಲ್ಲವಿಯವರ ಜೊತೆಯಲ್ಲಿ)
ಬಾರೆ ಸಖಿ ಚಂದ್ರಮುಖಿ
ಉಯ್ಯಾಲೆ (ವಿವಿಧ ಗಾಯಕರೊಂದಿಗೆ)
ಮೌನ ತಬ್ಬಿತು
ಮಾತು ಮರೆತ
ಸೌಂದರ್ಯ ಲಹರಿ (ಗಾಯಕಿ ನಂದಿತಾ ಜೊತೆ)
ಬಾಂದಳದ ರವಿಯೇ
ಹೀಗೆ ಸುಮಾರು ಸಾವಿರಕ್ಕೂ ಮೀರಿ ಆಲ್ಬಂಗಳೇ ಅಲ್ಲದೆ
ಉತ್ತರಧೃವದಿಂ…
ಮರೆಯದ ಕವಿತೆ ಹಾಡಾಯಿತು
ಮಡಮಕ್ಕಿ ಚಿತ್ರದ ಹೇಭಾಯ್ ಈ ಭೂಮಿ ನೋಡು
ಹಾಳೂರಲ್ಲಿ ಉಳಿದೋರ್ಯಾರು…
ಚಿತ್ರಗೀತೆಗಳು, ಕಾಮದ ಕೆಸರಿನಿಂದ ಬಂದ… ಹಾಗು ಮೈಸೂರಿ ಅನಂತಸ್ವಾಮಿಯವರ ನಿರ್ದೇಶನದಲ್ಲಿ ಹಾಡಿದ ಹತ್ತಾರು ಗೀತೆಗಳು… ಜ಼ೀ ಮ್ಯೂಸಿಕ್ಸ್ ಹೊರತಂಅ ಆಲ್ಬಮ್ 'ಸಪ್ನೆ', ಜಗಜಿತ್ ಸಿಂಗ್ ಅವರ ನಿರ್ದೇಶನದಲ್ಲಿ ಹಾಡಿದ ಪಂಜಾಬಿ ಭಾಷೆಯ ಚಿತ್ರದ ಗೀತೆ… ಹೀಗೆ ಒಂದಕ್ಕಿಂತ ಒಂದು ಎಂದು ಪೈಪೋಟಿ ಕೊಟ್ಟು ನಮ್ಮ ಕಿವಿಗಳಿಗೆ ತಂಪೆರೆಯುವುದಂತೂ ಸತ್ಯ.
ಇವೆಲ್ಲ ಹಿನ್ನೆಲೆ ಗಾಯನದೊಂದಿಗೆ, ದೇಶದಲ್ಲೂ ಹೊರದೇಶಗಳಲ್ಲಿಯೂ ಅನೇಕಾನೇಕ ಪ್ರದರ್ಶನಗಳನ್ನು ನೀಡಿ ವಿಶ್ವಾದ್ಯಂತ ಕನ್ನಡಿಗರ ಮನ ಸೂರೆಗೊಂಡಿದ್ದಾರೆ ಅರ್ಚನಾ ಉಡುಪ ಅವರು.
ಈ ಟಿ.ವಿ.ಯ ಎದೆ ತುಂಬಿ ಹಾಡುವೆನು ಸುಪ್ರಸಿದ್ಧ ಸ್ಪರ್ಧಾ ಕಾರ್ಯಕ್ರಮದಲ್ಲಿ ಶ್ರೀಯುತ.ಡಾ||ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಜೊತೆಯಲ್ಲಿ ಸಹ ತೀರ್ಪುಗಾರರಾಗಿದ್ದಿದ್ದು ಇವರಿಗೆ ಖುಷಿಕೊಟ್ಟ ಸಂಗತಿಗಳಲ್ಲಿ ಒಂದು. ಹಿಂದಿಯ ಮನ್ನಾಡೆ, ಸೋನು ನಿಗಮ್, ಅಲ್ಲದೆ ನಮ್ಮವರೇ ಏಸುದಾಸ್, ಎಸ್.ಪಿ.ಬಿ. ಪಿ.ಬಿ.ಎಸ್, ಶಂಕರ್ ಮಹದೇವನ್, ಹರಿಹರನ್ ಅಲ್ಲದೆ, ರಾಜೇಶ್ ಕೃಷ್ಣನ್ ಅವರೂ ಸೇರಿದಂತೆ ಈ ಎಲ್ಲ ಗಾಯಕರೊಂದಿಗೆ ಹಾಡಿದ್ದಾರೆ ಅರ್ಚನಾ. ಗಜ಼ಲ್ ಕಿಂಗ್ ಎಂದೇ ಹೆಸರಾದ ದಿ.ಶ್ರೀ.ಜಗಜಿತ್ ಸಿಂಗ್ ಅವರ ಜೊತೆಗೆ ಹಿಂದಿ ಗಜ಼ಲ್‍ಗಳಿಗೂ ಜೊತೆಯಾಗಿ ಕಂಠ ನೀಡಿದ್ದಾರೆ, ಅದೂ ಜಗತ್ತಿನ ಅದ್ಭುತಗಳಲ್ಲಿ ಒಂದಾದ 'ತಾಜ್‍ಮಹಲ್'ನ ಆವರಣದಲ್ಲಿಯೇ.
ಅಲ್ಲದೆ, ಮಹಾನ್ ಸಂಗೀತ ನಿರ್ದೇಶಕರುಗಳಾದ ವಿಜಯ ಭಾಸ್ಕರ್, ಉಪೇಂದ್ರ ಕುಮಾರ್, ಹಂಸಲೇಖ, ವಿ.ಮನೋಹರ್, ವಿಜಯ್ ಆನಂದ್, ರಾಜನ್ ನಾಗೇಂದ್ರ, ಮೈಸೂರು ಅನಂತಸ್ವಾಮಿ, ಸಿ.ಅಶ್ವಥ್, ಹೀಗೆ ಘಟಾನುಘಟಿ ಸಂಗೀತ ನಿರ್ದೇಶಕರುಗಳಿಗಾಗಿ ಹಾಡಿದ್ದಾರೆ.
ತಮ್ಮ ಹಾಡುಗಾರಿಕೆಯೊಂದಿಗೆ, 'ಗಾಂಧಾರ್' ಎನ್ನುವ ಕಲಾಸಾಂಸ್ಕೃತಿಕ ಸಂಘದ ಸಂಸ್ಥಾಪಕಿ ಮತ್ತು ನಿರ್ದೇಶಕಿಯೂ ಆಗಿದ್ದಾರೆ. ಈ ಸಂಸ್ಥೆಯ ಮೂಲಕ ಅನೇಕ ನವಗಾಯಕರಿಗೆ ವೇದಿಕೆಯನ್ನೂ ದೊರಕಿಸಿಕೊಡುತ್ತಿರುವುದು ಇವರ ಮತ್ತೊಂದು ಸಾಧನೆ.
ಇವರೆಲ್ಲಾ ಸಾಧನೆಗೆ "Indian music research academy" award in association with NAVRAS records,London ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಕರ್ನಾಟಕ ಹೆಮ್ಮೆಯ ಪ್ರಶಸ್ತಿ, ಸಹ್ಯಾದ್ರಿ ಪ್ರಶಸ್ತಿ, ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ, ಸಂಗೊಳ್ಳಿರಾಯಣ್ಣ ಪ್ರಶಸ್ತಿ, ಕರ್ನಾಟಕ ಚಿತ್ರರಸಿಕರ ಸಂಘವು ಕೊಡಮಾಡುವ 2015 ರ ವರ್ಷದ ಶ್ರೇಷ್ಠ ಗಾಯಕಿ ಪ್ರಶಸ್ತಿ… ಹೀಗೆ ಇವರಿಗೆ ಹತ್ತು ಹಲವು ಪ್ರಶಸ್ತಿಗಳು ಲಭ್ಯವಾಗಿರುವುದು ಕನ್ನಡದ ಹೆಮ್ಮೆ.
ಅರ್ಚನಾ, ಆಕಾಶವಾಣಿ ಮತ್ತು ದೂರದರ್ಶನದ ವಿದ್ಯುಕ್ತ ಗ್ರೇಡೆಡ್ ಕಲಾವಿದೆಯೂ ಹೌದು.
ಕಳೆದ 28+ ವರ್ಷಗಳಿಂದ ತಮ್ಮನ್ನು ತಾವು ಸಂಗೀತ ಕ್ಷೇತ್ರದ ವಿವಿಧ ರೀತಿಯ ಗಾಯನದಲ್ಲಿ ತೊಡಗಿಸಿಕೊಂಡಿರುವ ಅರ್ಚನಾ ಉಡುಪ ಅವರೇ, ನಿಮ್ಮ ಮಧುರ ಕಂಠದಿಂದ ಹೀಗೆ ನಿಮ್ಮ ಗೀತ-ಪ್ರಿಯರನ್ನು ರಂಜಿಸುತ್ತಿರಿ. ಆ ಕಲಾದೇವಿ ಸರಸ್ವತಿ ನಿಮಗೆ ಹೆಚ್ಚಿನ ಶಕ್ತಿ, ಆರೋಗ್ಯ, ನೆಮ್ಮದಿ, ಸುಖವನ್ನಿತ್ತು ಕಾಪಾಡಲಿ ಎಂಬುದೇ ಕಂಪನಾಂಕದ ಹಾರೈಕೆ.
#TuesdayTuner
ಇಂದಿಡೀ ದಿವಸ ಇವರ ಗಾಯನವನ್ನು ಮತ್ತು ಇವರದ್ದೇ ಮಾತು-ಸಂದೇಶವನ್ನು ಕೇಳಲು ಇಲ್ಲಿಗೆ ಬನ್ನಿ… 

https://t.me/Kampanaanka_Teleradio

ಕೋಕಿಲ ಕಂಠಿ!
No comments:
Post a Comment