An excellent Kannada Playback Singer!
ಇವರ ಗಾನ ಸಿರಿಗೆ ಮನಸೋಲದ ಕನ್ನಡಿಗರೇ ಇಲ್ಲ. ಸರಿ ಸುಮಾರು 7 ಭಾಷೆಗಳಲ್ಲಿ ಹಾಡಿದ್ದಾರೆ. ಇವರು ಹಾಡಲು ಆರಂಭಿಸಿದ ನಂತರದ 4ನೇ ಗೀತೆಯೇ ಇಳೆಯರಾಜ ಅವರ ಸಂಗೀತದ ಗೀತೆಯನ್ನು ಹಾಡಿ ಸೈ ಎನಿಸಿಕೊಂಡು 'ವರ್ಷದ ಅತ್ಯುತ್ತಮ ಗೀತೆ' ಎಂಬ ಪ್ರಶಸ್ತಿಯೂ ಬಂದಿದೆ. 100 ಸಿನಿಮಾಗಳಿಗೆ ಕೇವಲ 2 ವರ್ಷಗಳಲ್ಲಿ ಹಾಡಿ ದಾಖಲೆ ಮಾಡಿರುವ ಕೀರ್ತಿ ಈಕೆಗೆ.
ಕಷ್ಟವನ್ನು ಇಷ್ಟಪಟ್ಟಲ್ಲಿ ಮಾತ್ರ ಮನಸಾರೆ ಖುಷಿಯಾಗಿರಲು ಸಾಧ್ಯ ಎನ್ನುತ್ತಾರೆ ಈ ಗಾಯಕಿ.
ಡಾಕ್ಟರ್ ಆಗಬೇಕೆಂದು ಆಸೆ ಪಟ್ಟರೂ ಮನಸ್ಸುಗಳನ್ನು ತಣಿಸುವುದು ಸಂಗೀತ ಎನ್ನುವುದನ್ನು ಅರಿತು ಸಂಗೀತ ಕ್ಷೇತ್ರಕ್ಕೆ ಬರಲು ಸಾಧ್ಯವಾಯಿತು ಎನ್ನುತ್ತಾರೆ.
ದುಡ್ಡುಕೊಟ್ಟು ತಯಾರು ಮಾಡುವ ವಸ್ತುವಲ್ಲ ಗಾಯನ ಅನ್ನುವುದು. ಶರಣಾಗಿ ಬೊಗಸೆಯೊಡ್ಡಿ ನಿಷ್ಟೆ ತೋರಿದರಷ್ಟೇ ಒಲಿಯುವ ಕಲೆ ಇದು. ನಾನು ಅದೃಷ್ಟವಂತೆ, ಹುಟ್ಟಿನಿಂದಲೇ ಹಾಡುಗಾರ್ತಿ ಆಗಿದ್ದೆ. ಓದುವುದರಲ್ಲಿ ಇದ್ದ ಜಾಣ್ಮೆ ಪ್ಲೇ ಬ್ಯಾಕ್ ಸಿಂಗರ್ ಆಗಲು ತುಂಬಾನೇ ಸಹಾಯವಾಯಿತು ಎನ್ನುವ ನಮ್ಮ ಕನ್ನಡತಿ ಮಂಜುಳಾಗುರುರಾಜ್.
ಹೌದು ಕಂಪನಾಂಕಿಗಳೇ #ಕಂಪನಾಂಕಟೆಲಿರೇಡಿಯೋ'ದ #ವಾರದವಿಶೇಷ ಅಂಕಣದಲ್ಲಿಂದು ಶಾಸ್ತ್ರೀಯ ಸಂಗೀತ, ಲಘು ಸಂಗೀತ, ಭಕ್ತಿಗೀತೆ ಮತ್ತು ಚಲನಚಿತ್ರ ಹಿನ್ನೆಲೆ ಗೀತ ಗಾಯಕಿ, ಸಂಗೀತ ನಿರ್ದೇಶಕಿ ಶ್ರೀಮತಿ. ಮಂಜುಳಾ ಗುರುರಾಜ್ ಅವರ ಕಿರು, ಮರು ಪರಿಚಯ ನಿಮಗಾಗಿ.
ಮಂಜುಳಾ ಗುರುರಾಜ್, ಭಾರತೀಯ ಮಹಿಳಾ ಹಿನ್ನೆಲೆ ಗಾಯಕಿ ಮತ್ತು ಧ್ವನಿದಾನ ಕಲಾವಿದೆ. ಯಶಸ್ವಿ ಧ್ವನಿಮುದ್ರಿಕೆಗಳಿಗಾಗಿ ಸಾವಿರಾರು ಹಾಡುಗಳು ಮತ್ತು ನೂರಾರು ಕನ್ನಡ ಲಘು ಸಂಗೀತ ಹಾಡುಗಳನ್ನು ಹಾಡಿದ್ದಾರೆ. ಇವರು ಚಲನಚಿತ್ರ ಗೀತೆಗಳಲ್ಲಿ ನೀಡಿದ ಕೊಡುಗೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ ಮತ್ತು 80ರ ದಶಕದ ಉತ್ತರಾರ್ಧದಲ್ಲಿ ಹಾಗು 90ರ ದಶಕದಾದ್ಯಂತ ಮುಂಚೂಣಿಯಲ್ಲಿದ್ದ ಅತ್ಯಂತ ಪ್ರಮುಖ ಹಿನ್ನೆಲೆ ಗಾಯಕರಲ್ಲಿ ಒಬ್ಬರಾಗಿದ್ದಾರೆ.
ಮಂಜುಳಾ ಗುರುರಾಜ್ ಅವರು ಹುಟ್ಟಿದ ದಿನ ಜೂನ್ 10. ತಂದೆ ಡಾ. ಎಂ. ಎನ್. ರಮಣ ಮತ್ತು ತಾಯಿ ಜಿ. ಸೀತಾಲಕ್ಷ್ಮಿ ಅವರು. ವಿಜ್ಞಾನ ಪದವೀಧರೆಯಾದ ಮಂಜುಳಾ ಅವರು ಕರ್ನಾಟಕ ಮತ್ತು ಹಿಂದೂಸ್ಥಾನಿ ಸಂಗೀತ ಶೈಲಿಗಳೆರಡನ್ನೂ ಶಾಸ್ತ್ರೀಯವಾಗಿ ಅಭ್ಯಾಸ ಮಾಡಿದ್ದಾರೆ.
ಹಂಸಲೇಖ ಅವರ ಅಣ್ಣ ಬಾಲರಾಜ್ ಅವರು ನಡೆಸುತ್ತಿದ್ದ, 'ಗಾನಶಾರದ ಆರ್ಕೆಸ್ಟ್ರಾ ತಂಡ'ದಿಂದ ಪ್ರಾರಂಭವಾದ ಮಂಜುಳಾ ಅವರ ಸಂಗೀತ ವೃತ್ತಿಯು ಹತ್ತಿರತ್ತಿರ 4 ದಶಕಗಳನ್ನು ಮೀರಿದೆ.
ಜೋಸೈಮನ್ ನಿರ್ದೇಶನದ ರೌಡಿ ರಾಜ ಚಿತ್ರಕ್ಕೆ 1983 ನವೆಂಬರ್ 1, ಮೊದಲು ಹಿನ್ನೆಲೆ ಗಾಯಕಿಯಾಗಿ ಹಾಡಿದ್ದು. ಹಾಡಿದ್ದು ಚಿ.ಉದಯಶಂಕರ್ ಅವರ ಗೀತೆ ಸತ್ಯಂ ನಿರ್ದೇಶನದಲ್ಲಿ… "ನಗುವುದನೂ ಕಲಿಯುವೆಯ…" ಮಂಜುಳ ಗುರುರಾಜ್ ರನ್ನು ಹಿನ್ನೆಲೆ ಗಾಯಕಿಯನ್ನಾಗಿಸಿದ ಮೊದಲ ಗೀತೆ.
'ಚಿತ್ರ-ವಿಚಿತ್ರ ಗೀತೆಗಳು' ಇದು ಮಂಜುಳಾ ಮತ್ತು ಗುರುರಾಜ್ ದಂಪತಿಗಳ ಒಂದು ಯೋಜನೆ. ಇದರಲ್ಲಿ ಹಿಂದಿಯಲ್ಲಿ ಹೆಸರಾದ ಗೀತೆಗಳಲ್ಲಿನ ಸಂಗೀತದಂತೆಯೇ ಸಂಗೀತ ನೀಡಿ ಕನ್ನಡದಲ್ಲಿ ಸಾಹಿತ್ಯ ಬರೆದು ಹಾಡುವ ಒಂದು ಯೋಜನೆ ಇದಾಗಿತ್ತು. 81ರಲ್ಲೇ ಟ್ರ್ಯಾಕ್ ಗಾಯಕಿಯಾಗಿದ್ದ ಮಂಜುಳ ಅವರು ಈ ಯೋಜನೆಯಡಿಯಲ್ಲಿ ಹಾಡಿದ ಮೊದಲ ಗೀತೆ 'ಆಪ್ ಜೈಸ ಕೋಯಿ ಮೆರಿ ಜ಼ಿಂದಗಿ ಮೆ ಆಯೆ…' ಹಿಂದಿಯಿಂದ ಕನ್ನಡಕ್ಕಿಳಿಸಿದ ಕನ್ನಡ ಅವತರಣಿಕೆ 'ನಿನ್ನ ಹಾಗೆ ಒಬ್ಬನು ನನ್ನ ಮನಕೆ ಬಂದರೆ ಸಂತೋಷವು ಆಹಾ ಸಂತೋಷವು…
ಒಳಗೆ ಸೇರಿದರೆ ಗುಂಡು… 1988ರ 'ನಂಜುಂಡಿ ಕಲ್ಯಾಣ' ಚಿತ್ರದ ಈ ಗುಂಡಿನ ಗೀತೆ ಮೊದಲೇ ಹೆಸರಾಗಿದ್ದ ಮಂಜುಳ ಅವರನ್ನು ಪ್ರಸಿದ್ಧಿಯ ಉತ್ತುಂಗಕ್ಕೇರಿಸಿದ್ದಂತೂ ಸತ್ಯ! 24ಯುಗಳಗೀತೆಗಳನ್ನು ಡಾ.ರಾಜ್ ಅವರ ಜೊತೆ ಹಾಡಿ ಕನ್ನಡ ಗಾಯಕಿಯರ ಮಟ್ಟಿಗೆ ದಾಖಲೆ ಬರೆದವರು ಮಂಜುಳಾ.
ಮಂಜುಳಾ ಗುರುರಾಜ್ ಅವರು "ಸಾಧನ ಸಂಗೀತ ಶಾಲೆ" ಎಂಬ ಸಂಗೀತ ಶಾಲೆಯನ್ನು ನಡೆಸುತ್ತಿದ್ದಾರೆ, ಇದು ಸಂಗೀತ ಕ್ಷೇತ್ರದಲ್ಲಿ ಅನೇಕ ಯುವಕರಿಗೆ ತರಬೇತಿ ನೀಡುತ್ತದೆ. ಇದನ್ನು ಜೂನ್ 21, 1991 ರಂದು ಬೆಂಗಳೂರಿನಲ್ಲಿ ಪ್ರಾರಂಭಿಸಿದರು, ಪ್ರಸಿದ್ಧ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರು ಬಸವನಗುಡಿಯಲ್ಲಿನ ಶಾಖೆಯನ್ನು ಉದ್ಘಾಟಿಸಿದರು. ಸಾಧನಾ ಸಂಗೀತ ಶಾಲೆ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಕರ್ನಾಟಕದಾದ್ಯಂತ ತನ್ನ ಅಸ್ತಿತ್ವವನ್ನು ಸ್ಥಾಪಿಸಿದೆ. ಬೆಂಗಳೂರಿನ ಮಲ್ಲೇಶ್ವರ, ಜಯನಗರ ಮತ್ತು ಗಾಂಧಿಬಜ಼ಾರ್'ಗಳಲ್ಲಿ ಸಾಧನ ಸಂಗೀತ ಶಾಲೆಯ ಶಾಖೆಗಳಿವೆ.
ಅವರು 1982 ರಲ್ಲಿ ಟಿ.ಎಸ್. ನಾಗಾಭರಣ ನಿರ್ದೇಶನದ 'ಆಹುತಿ' ಚಿತ್ರಕ್ಕಾಗಿ ಡಬ್ಬಿಂಗ್ ಮುಖಾಂತರ ಧ್ವನಿದಾನ ಕಲಾವಿದೆಯ ವೃತ್ತಿಯನ್ನು ಪ್ರಾರಂಭಿಸಿದರು. ಕೇಳಿಸುವ ಆದರೆ ಕಾಣಿಸದ ನಾಯಕಿಗಾಗಿ ಧ್ವನಿ ನೀಡಿದ 'ಬೆಳದಿಂಗಳ ಬಾಲೆ' ಚಿತ್ರಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರ ವಿಶೇಷ ತೀರ್ಪುಗಾರರಿಂದ ಅತ್ಯುತ್ತಮ ಧ್ವನಿದಾನ ಕಲಾವಿದೆ ಎಂದು ಪ್ರಶಸ್ತಿಯನ್ನು ಪಡೆದರು.
ಟಿ.ಎಸ್.ನಾಗಾಭರಣ ನಿರ್ದೇಶನದ ಚಿನ್ನಾರಿ ಮುತ್ತ ಎಂಬ ಕನ್ನಡ ಚಲನಚಿತ್ರದಲ್ಲಿನ 'ಮ್ಯಾಲೆ ಕವಕೊಂಡ ಮುಂಗಾರುಮೋಡ' ಹಾಡಿಗೆ ಹಾಗೂ ಸಿ.ಅಶ್ವಥ್ ಅವರ ಸಂಗೀತ ನಿರ್ದೇಶನಕ್ಕಾಗಿ ಕರ್ನಾಟಕ ಸರ್ಕಾರದಿಂದ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಪಡೆದಿದ್ದಾರೆ.
1983 ರಿಂದ 1998 ರವರೆಗೆ 14 ವರ್ಷಗಳ ಕಾಲ ಬೆಂಗಳೂರು ದೂರದರ್ಶನ ಮತ್ತು 1981-1983 ರಿಂದ ಆಕಾಶವಾಣಿಯಲ್ಲಿ ಸುದ್ದಿ ನಿರೂಪಕರಾಗಿಯೂ ಕೆಲಸ ನಿರ್ವಹಿಸಿದ್ದಾರೆ ಮಂಜುಳಾ.
ಸೌಂಡ್ ಆಫ್ ಮ್ಯೂಸಿಕ್ ತಂಡದ ಗುರುರಾಜ್ ಅವರನ್ನು ಮದುವೆಯಾದ ಮಂಜುಳಾ ಅವರಿಗೆ ಸಂಗೀತ ಮತ್ತು ಸಾಗರ್ ಎಂಬ ಮಕ್ಕಳಿದ್ದು, ಅವರೂ ಸಹ ಸಂಗೀತ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ.
ಎಸ್. ಪಿ. ಬಾಲಸುಬ್ರಹ್ಮಣ್ಯಂ, ಕೆ.ಜೆ.ಯೇಸುದಾಸ್ ಮುಂತಾದ ಗಾಯಕರೊಂದಿಗೆ ಅವರು ಹಾಡಿದ್ದಾರೆ. ಉಪೇಂದ್ರಕುಮಾರ್, ರಾಜನ್-ನಾಗೇಂದ್ರ, ಇಳಯರಾಜ, ಹಂಸಲೇಖ ಮುಂತಾದ ಸಂಯೋಜಕರ ಹಾಡುಗಳನ್ನು ಹಾಡಿರುವ ಮಂಜುಳಾ, ಸಾವಿರಾರು ಭಕ್ತಿಗೀತೆ, ಭಾವಗೀತೆ ಮತ್ತು ಜನಪದ ಗೀತೆಗಳನ್ನು ಹಾಡಿದ್ದಾರೆ.
ಅವರು ಹಾಡಿರುವ ಪ್ರಸಿದ್ಧ ಚಲನಚಿತ್ರ ಗೀತೆಗಳಲ್ಲಿ ಕೆಲವು ಹೀಗಿವೆ…
ಒಳಗೆ ಸೇರಿದರೆ ಗುಂಡು (ನಂಜುಂಡಿ ಕಲ್ಯಾಣ)
ಮಧುವಾದೆ ನೀನು ನನ್ನ ಬಾಳಿಗೆ (ಪುರುಷೋತ್ತಮ)
ಒಂದೇ ಜೀವ ಒಂದೇ ಭಾವ (ನಾಗಿಣಿ)
ಪ್ರೀತಿಯಲ್ಲಿ ಇರೋ ಸುಖ (ಅಂಜದ ಗಂಡು)
ಚೆಲುವೆ ನೀನು ನಕ್ಕರೆ (ನೀನು ನಕ್ಕರೆ ಹಾಲು ಸಕ್ಕರೆ)
ಒಂದು ಮುತ್ತಿನಂಥ ಮುತ್ತು (ಸಾಂಗ್ಲಿಯಾನ)
ಗಿರಿನವಿಲು ಎಲ್ಲೋ (ಹೃದಯ ಹಾಡಿತು)
ಕಣ್ಣಲ್ಲಿ ಜ್ಯೋತಿ ತಂದೋನು ನೀನೇ (ಹೃದಯ ಹಾಡಿತು)
ದೀಪಾವಳಿ ದೀಪಾವಳಿ (ಮುದ್ದಿನ ಮಾವ)
ಅನುರಾಗದ ಹೊಸ ಆನಂದವು (ಅದೇ ರಾಗ ಅದೇ ಹಾಡು)
ಆಗುಂಬೆಯ ಪ್ರೇಮಸಂಜೆಯ (ಆಕಸ್ಮಿಕ)
ಹೃದಯದಲಿ ಇದೇನಿದು ನದಿಯೊಂದು ಓಡಿದೆ (ದೇವತಾ ಮನುಷ್ಯ)
ಯಾರಮ್ಮ ಇವನು ನಶೆಯ ಹುಡುಗ (ಮೋಜುಗಾರ ಸೊಗಸುಗಾರ)
ಇವನ್ಯಾರ ಮಗನೋ ಹಿಂಗವ್ನಲ್ಲ (ಜನುಮದ ಜೋಡಿ)
ತುಂಟಕಣ್ಣಲಿ ಏನೋ ತಳಮಳ (ಇನ್ಸ್ಪೆಕ್ಟರ್ ವಿಕ್ರಂ)
ನನ್ನ ನಿನ್ನ ಆಸೆ (ಮಿಡಿದ ಶೃತಿ)
ಮನದಾಸೆ ಹಕ್ಕಿಯಾಗಿ (ನಮ್ಮೂರ ಮಂದಾರ ಹೂವೆ)
ಅಯ್ಯೋ ಸುಮ್ಮನಿರ್ರಿ ಸುಮ್ಮನಿರ್ರಿ (ಶಬ್ದವೇದಿ)
ಮಂಜುಳಾ ಗುರುರಾಜ್ ಮೇಡಮ್, ಮತ್ತಷ್ಟು ದಶಕಗಳು ನಮ್ಮ ಮನಗಳಿಗೆ ಹೀಗೆಯೇ ನಿಮ್ಮ ಕಂಠ ರಸಸುಧೆಯನ್ನು ಹರಿಸುತ್ತಿರಿ. ಭಗವಂತ ನಿಮಗೆ ಹೆಚ್ಚಿನ ಚೈತನ್ಯ, ಆಯುರಾರೋಗ್ಯವನ್ನು ಕೊಟ್ಟು ಕಾಪಾಡಲಿ ಎಂದು ಹಾರೈಸುತ್ತದೆ ಕಂಪನಾಂಕ.
ಮಂಜುಳ ಅವರ ಇನಿದನಿಯಲ್ಲಿ ಗೀತೆಗಳಿಗೆ ಕಿವಿಯಾಗಲಿ ಇಂದು ಇಲ್ಲಿಗೆ ಬನ್ನಿ…
https://t.me/Kampanaanka_Teleradio
No comments:
Post a Comment